ಕಲೀಫರು, ಅರೇಬಿಯದ : ಪೈಗಂಬರ್ ಮಹಮ್ಮದರ ಧಾರ್ಮಿಕ ಉತ್ತರಾಧಿಕಾರಿಗಳು ಹಾಗೂ ಅರಬ್ ಮುಸ್ಲಿಂ ಸಾಮ್ರಾಜ್ಯ ಮುಖ್ಯರು. ಮಹಮ್ಮದರ ಅನಂತರ ಮದೀನದಲ್ಲಿ ಅನುಕ್ರಮವಾಗಿ ಆಳಿದ ಮೊದಲ ನಾಲ್ಕು ಮಂದಿ ಕಲೀಫರದು ಒಂದು ಮಾಲಿಕೆ. ಇವರು ಮದೀನದ ಕಲೀಫರೆಂದು ಪ್ರಸಿದ್ಧರಾಗಿದ್ದಾರೆ. ಆಮೇಲೆ ಬಂದವರು ದಮಾಸ್ಕಸಿನ ಉಮಾಯದ್ ಕಲೀಫರು. ಅನಂತರ ಅಬ್ಬಾಸಿದ್ ಕಲೀಫರು ಬಾಗ್ದಾದಿನಿಂದ ಆಳಿದರು. ಕಲೀಫ ಎಂಬುದು ಆರಂಭದಲ್ಲಿ ಒಂದು ಹುದ್ದೆಯಾಗಿದ್ದು ಅನಂತರ ಒಂದು ಬಿರುದಾಗಿ ಪರಿವರ್ತನೆಗೊಂಡಿತು. ೬೩೨ರಲ್ಲಿ ಆರಂಭವಾದ ಕಲೀಫ್ ವ್ಯವಸ್ಥೆ ೧೯೨೪ರ ವರೆಗೆ ವಿವಿಧ ರೂಪಗಳಲ್ಲಿ ಮುಂದುವರಿಯಿತು. ಮೊದಲ ನಾಲ್ವರ ಕಾಲ ೬೩೨-೬೬೧. 	(ಎಸ್.ವಿ.ಡಿ.)

ಮೊದಲ ನಾಲ್ವರು
ಮುಸ್ಲಿಂ ಜನಾಂಗದ ಭಾವೀ ಆಡಳಿತದ ಬಗ್ಗೆ ಯಾವ ಸೂಚನೆಯನ್ನೂ ನೀಡದೆ ೬೩೨ ಜೂನ್ ೮ರಂದು ಮಹಮ್ಮದ್ ಪೈಗಂಬರ್ ತೀರಿಕೊಂಡಾಗ ಸ್ವಲ್ಪ ಗೊಂದಲವೇ ಉಂಟಾಗಿತ್ತು. ಮದೀನದಲ್ಲಿ ಹಲವಾರು ಪಂಗಡಗಳವರೂ ಮೆಕ್ಕದಲ್ಲಿದ್ದ ಮುಸ್ಲಿಮರೂ ಸಭೆ ಸೇರಿದರು. ದೀರ್ಘ ಚರ್ಚೆ ಆದ ಅನಂತರ ಅಬುಬಕರನನ್ನು ತಮ್ಮ ನಾಯಕನೆಂದು ಪರಿಗಣಿಸಬೇಕೆಂದು ತೀರ್ಮಾನವಾಯಿತು. ಖಲೀಫತ್ ರಸುಲ್_ಅಲ್ಲಾ (ದೇವರ ದೂತನ ಉತ್ತರಾಧಿಕಾರಿ) ಎಂಬ ಬಿರುದನ್ನು ಅಬುಬಕರ್ ತಳೆದ. ಕಲೀಫ್ ಎಂಬ ಪದ ಇದರಿಂದ ಬಂದದ್ದು (ಕಲೀಫ್ ಎಂದರೆ ಪ್ರತಿನಿಧಿ ಎಂಬ ಅರ್ಥವೂ ಉಂಟು). ಪೈಗಂಬರ್ ಬದುಕಿದ್ದಾಗ ಒಮ್ಮೆ ಅಸ್ವಸ್ಥರಾಗಿದ್ದ ಸಮಯದಲ್ಲಿ ತಮ್ಮ ಅನುಯಾಯಿ ಹಾಗೂ ಸೋದರ ಮಾವ ಅಬುಬಕರನನ್ನೇ ಪ್ರಾರ್ಥನೆಯ ನೇತೃತ್ವ ವಹಿಸಲು ನೇಮಿಸಿದ್ದರಂತೆ.
ಅಬುಬಕರ್
ಸು. ೫೭೩ರಲ್ಲಿ ಹುಟ್ಟಿದ ಈತ ಮಕ್ಕದ ಕುರೇಷ್ ಪಂಗಡದ ತಾಯಿಂ ಗುಂಪಿಗೆ ಸೇರಿದವ. ಈತ ಮೂಲತಃ ವ್ಯಾಪಾರಿ. ಪೈಗಂಬರರ ಮನೆತನದ ಜನರ ಅನಂತರ ಮತಾಂತರಗೊಂಡ ವ್ಯಕ್ತಿಗಳಲ್ಲಿ ಮೊದಲಿಗ. ಅಬುಬಕರನ ಮಗಳಾದ ಆಯೇಷಾಗೆ ಪೈಗಂಬರರೊಂದಿಗೆ ಮದುವೆಯಾಗಿತ್ತು. ಹೆಜಿರಾದ (ಪಲಾಯನ) ಕಾಲಕ್ಕೆ ಈತ ಪೈಗಂಬರರ ಜೊತೆಯಲ್ಲಿದ್ದ. ೬೩೨ರಲ್ಲಿ ಕಲೀಫತ್ ರಸುಲ್_ಅಲ್ಲಾ ಆಗಿ ಈತ ಆಯ್ಕೆಯಾದಾಗ ಪೈಗಂಬರರ ಅಳಿಯ ಅಲಿ ಮತ್ತು ಚಿಕ್ಕಪ್ಪ ಅಬ್ಬಾಸ್ ವಿರೋಧಿಸಿದ್ದರು. ಆದರೆ ಮುಂದೆ ಅಲಿ ಬೆಂಬಲ ವ್ಯಕ್ತಪಡಿಸಿದ. ಆದರೂ ಈತ ಕಲೀಫ್ ಆದೊಡನೆ ಕೆಲವೊಂದು ಅರಬ್ ಮುಸ್ಲಿಂ ಪಂಗಡಗಳೇ ಈತನ ವಿರುದ್ಧ ದಂಗೆಯೆದ್ದುವು. ೬೩೩ರಲ್ಲಿ ಬಂಡಾಯಗಾರರನ್ನು ಸೋಲಿಸಲಾಯಿತು. ಬಿಝಾಂಟಿಯಂ ಸಾಮ್ರಾಜ್ಯಕ್ಕೆ ಒಳಪಟ್ಟಿದ್ದ ಸಿರಿಯದ ಅರಬರು ತಮ್ಮ ಸಮ್ರಾಟನ ವಿರುದ್ಧ ಇವನಲ್ಲಿ ನೆರವು ಯಾಚಿಸಿದಾಗ ಈತ ಬಿಝಾಂಟಿಯಂನ ವಿರುದ್ಧ ಅರಬರ ಭಾವನೆಗಳನ್ನು ಕೆರಳಿಸಿ ಅರೇಬೀಯದ ಐಕ್ಯ ಸಾಧಿಸಿದ. ಅವರ ಸೇನಾನಿಯಾದ ಖಲೀದ್ ಇಬ್ನ್‌ ಅಲ್-ವಲೀದ್ ಸಿರಿಯದ ಹಿರಾ ಪಟ್ಟಣವನ್ನು ೬೩೩ರಲ್ಲಿ ಗೆದ್ದುಕೊಂಡ. ೬೩೪ರಲ್ಲಿ ದಮಾಸ್ಕಸ್ ಬಳಿ ಬಿಝಾಂಟಿಯಂನ ಸೇನೆಯನ್ನು ಸೋಲಿಸಿ ಇಡೀ ಸಿರಿಯವನ್ನು ವಶಪಡಿಸಿಕೊಂಡ. ಆದರೆ ಅದಕ್ಕೆ ಮೊದಲೇ ಅಬು ಬಕರ ತೀರಿಕೊಂಡಿದ್ದ. ಮದೀನದಲ್ಲಿ ಪೈಗಂಬರ್ ಮತ್ತು ಆಯೇಷಾರ ಸಮಾಧಿಯ ಬಳಿಯೇ ಈತನ ಸಮಾಧಿಯೂ ಇದೆ. 
ತನ್ನ ೫೯ನೆಯ ವಯಸ್ಸಿನಲ್ಲಿ ಕಲೀಫ್ ಪದವಿಗೇರಿದ ಅಬುಬಕರ್ ಸರಳಜೀವಿ; ಈತನಿಗೆ ಯಾವ ದುಶ್ಚಟಗಳೂ ಇರಲಿಲ್ಲ. ಕಲೀಫ್ ಹುದ್ದೆಗಾಗಿ ನೀಡುತ್ತಿದ್ದ ವೇತನವನ್ನು ಈತ ಆರಂಭದಲ್ಲಿ ಸ್ವೀಕರಿಸಲಿಲ್ಲ; ಮುಂದೆ ಸರ್ಕಾರಕ್ಕೇ ಮರಳಿಸಿದ. 
ಮುಂದಣ ಮೂವರು ಕಲೀಫರೂ ಪೈಗಂಬರರ ಜಾಮಾತರು.

ಉಮರ್(೬೩೪-೪೪)
ಎರಡನೆಯ ಕಲೀಫ್ ಉಮರ್ ಅಬು ಹಫ್ಸಾ ಇಬ್ನ್‌ ಅಲ್-ಖತಾಬ್ ಪೈಗಂಬರರ ಮಗಳಾದ ಹಫಸಾಳನ್ನು ವರಿಸಿದ್ದ. ೫೮೧ - ೫೮೫ರ ನಡುವೆ ಹುಟ್ಟಿರಬಹುದಾದ ಈತ ಕುರೆಯ್ಕ್‌ ಪಂಗಡದ ಅಡಿಗುಂಪಿಗೆ ಸೇರಿದವ. ಅಬುಬಕರನ ಪ್ರಮುಖ ಸಲಹೆಗಾರನಾಗಿದ್ದ. ತನಗೆ ಕಲೀಫ್ ಪದವಿ ದೊರೆತೊಡನೆ ಅಲ್-ವಲೀದನನ್ನು ಸೇನಾಧಿಪತ್ಯದಿಂದ ತೆಗೆದು ಅಬು ಉಬೇದಾನನ್ನು ಆ ಸ್ಥಾನಕ್ಕೆ ನೇಮಿಸಿದ. ಅಲ್-ವಲೀದ ೬೩೫ರಲ್ಲಿ ದಮಾಸ್ಕಸನ್ನೂ ೬೩೬ರಲ್ಲಿ ಅಂಟಿಯಾಕನ್ನೂ ೬೩೮ರಲ್ಲಿ ಜೆರುಸಲೆಮನ್ನೂ ವಶಪಡಿಸಿಕೊಂಡ. ೬೪೦ರ ವೇಳೆಗೆ ಇಡೀ ಸಿರಿಯ ಅವನ ಅಧೀನವಾಯಿತು. ೬೪೧ರಲ್ಲಿ ಪರ್ಷಿಯದ ಮೇಲೆ ದಂಡೆತ್ತಿ ಹೋಗಿ ಆ ದೇಶದ ಬಹುಭಾಗವನ್ನೂ ಗೆದ್ದುಕೊಂಡ. ಉಮರನ ಕಾಲದಲ್ಲೇ ಈಜಿಪ್ಟನ್ನೂ ಗೆಲ್ಲಲಾಯಿತು (೬೪೧). ಉಮ್ಮಾಯಿದ್ ಗುಂಪಿನ ಅಬು ಸುಫಿಯಾನನ ಮಗ ಮುಆವಿಯನನ್ನು ಸಿರಿಯದ ಮಂಡಲಾಧಿಕಾರಿಯಾಗಿ ಉಮರ್ ನೇಮಿಸಿದ. ೬೪೪ ನವೆಂಬರ್ ತಿಂಗಳಲ್ಲಿ ಪ್ರಾರ್ಥನೆ ನಡೆಸುವಾಗ ಪಾರಸಿಕ ಗುಲಾಮನೊಬ್ಬ ಅವನನ್ನು ಮರಣಾಂತಿಕವಾಗಿ ಘಾತಿಸಿದ. ತನ್ನ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಆರು ಜನ ಪ್ರಮುಖರನ್ನು ಹೆಸರಿಸಿ ಉಮರ್ ತೀರಿಕೊಂಡ.

ಅಮೀರ್ ಅಲ್ ಮುಪಿಸಿನ್ (ಆಸ್ತಿಕರ ನಾಯಕ) ಎಂಬ ಬಿರುದು ಧರಿಸಿದ್ದ ಉಮರ್ ಸರಳಜೀವಿ, ನೇಮನಿಷ್ಠಾವಂತ. ಒಂದು ಅಂಗಿ ಮತ್ತು ಒಂದು ಟೋಪಿ ಇವು ಮಾತ್ರ ಅವನಲ್ಲಿದ್ದ ಬಟ್ಟೆಗಳು. ಬಾರ್ಲಿಯ ರೊಟ್ಟಿ ಮತ್ತು ಖರ್ಜೂರ-ಇವೇ ಅವನ ಆಹಾರ. ಜೆರುಸಲೆಂನಲ್ಲಿರುವ ಕುಬ್ಬೆತ್ ಎಸ್ ಲಾಬ್ರಾ ಮಸೀದಿ ಅವನ ನಿರ್ಮಾಣವೆಂದು ನಂಬಲಾಗಿದೆ.

ಉತ್ಮಾನ್ : ೬೪೪-೫೬
ಉಮರನ ಅನಂತರ ಉತ್ಮಾನ್ ಇಬ್ನ್‌ ಅಫ್ತಾನ್ ಕಲೀಫನಾದ. ಈತ ಪೈಗಂಬರರ ಇನ್ನೊಬ್ಬ ಜಾಮಾತ. ಉಮರ್ ನೇಮಿಸಿದ್ದ ಆರು ಮಂದಿ ಪ್ರಮುಖರು ಈತನನ್ನು ಕಲೀಫನೆಂದು ಆಯ್ಕೆ ಮಾಡಿದರು. ಸು. ೫೭೪ರಲ್ಲಿ ಈತ ಹುಟ್ಟಿದ. ಇವನ ಕಾಲದಲ್ಲಿ ಇಸ್ಲಾಂ ಸಾಮ್ರಾಜ್ಯ ಹಿರಾತ್, ಕಾಬೂಲ್, ಬಾಲ್ಖ, ಟಿಪ್ಲಿಸ್ ಗಳನ್ನು ಒಳಗೊಂಡಿತ್ತು. ಇವನ ಸೇನೆಗಳು ಕಪ್ಪು ಸಮುದ್ರದ ದಂಡೆಯವರೆಗೂ ಬಂದಿದ್ದುವು. ನೌಕಾಸೇನೆಯೊಂದನ್ನು ಸಂಘಟಿಸಿ ಸೈಪ್ರಸ್ ದ್ವೀಪವನ್ನು ಗೆಲ್ಲಲಾಯಿತು. ಕುರಾನ್ಗೆ ಈಗಿನ ರೂಪ ಕೊಡಲಾದ್ದು ಈತನ ಕಾಲದಲ್ಲೇ. ಈಜಿಪ್ಟಿನ ಕೆಲವು ಮುಸಲ್ಮಾನರು ಇವನ ವಿರುದ್ಧ ದಂಗೆಯೆದ್ದರು. ದಂಗೆಕೋರರು ಮದೀನಕ್ಕೆ ನುಸುಳಿ ಬಂದು ೬೫೬ರಲ್ಲಿ ಇವನನ್ನು ಕೊಂದರು. ಕಲೀಫ್ ಅಬುಬಕರನ ಮಗ ಮಹಮ್ಮದನೇ ಇವನನ್ನು ಕೊಂದನೆಂದು ಹೇಳಲಾಗಿದೆ.

ಅಲಿ: ೬೫೬-೬೧
ಈತ ಮುಂದಿನ ಕಲೀಫ. ಇಸ್ಲಾಮನ್ನನುಸರಿಸಿದ ಮೊದಲಿಗರಲ್ಲೊಬ್ಬ. ಈತನ ತಂದೆ ಅಬೂ ಕಲೀಬ್-ಕುರೇಷ್ ಪಂಗಡದ ಹಕೀಂ ಗುಂಪಿನ ನಾಯಕ, ಪೈಗಂಬರನ ಕಕ್ಕ. ಬಾಲ್ಯದಲ್ಲೇ ಧೈರ್ಯಶಾಲಿಯೆಂಬ ಹೆಸರುಗಳಿಸಿದ್ದ. ಚಿಕ್ಕಂದಿನಿಂದಲೂ ಪೈಗಂಬರರ ಜೊತೆಯಲ್ಲೇ ಬೆಳೆದು ಪೈಗಂಬರರ ಮೊದಲ ಹೆಂಡತಿ ಖದೀಜಾಳ ಮಗಳನ್ನು ಮದುವೆಯಾಗಿದ್ದ. 
ಅಲಿ ಕಲೀಫನಾದಗಲೂ ಫೈಗಂಬರರ ಅನೇಕ ಅನುಯಾಯಿಗಳು ಪೈಗಂಬರರ ಹೆಂಡತಿ ಆಯೇಷಾಳ ನೇತೃತ್ವದಲ್ಲಿ ದಂಗೆಯೆದ್ದರು. ದಕ್ಷಿಣ ಇರಾಕಿನ ಬಸ್ರಾ ಬಳಿ ನಡೆದ ಯುದ್ಧದಲ್ಲಿ ಒಂಟೆಯ ಮೇಲೆ ಕೂತು ಸೇನೆಗೆ ಮಾರ್ಗದರ್ಶನ ನೀಡುತ್ತಿದ್ದ ಆಯೇಷಾಳನ್ನು ಅಲಿ ಪುರ್ತಿಯಾಗಿ ಸೋಲಿಸಿ ಆಕೆಯನ್ನು ಗೌರವಪೂರ್ವಕವಾಗಿ ಮದೀನಕ್ಕೆ ಮರಳಿಸಿದ. ಈ ಯುದ್ಧದಲ್ಲಿ ಇರಾಕಿನ ಕುಫಾ ಪಟ್ಟಣದ ಜನ ನೀಡಿದ ನೆರವಿಗಾಗಿ ಅಲಿ ತನ್ನ ರಾಜಧಾನಿಯನ್ನು ಅಲ್ಲಿಗೆ ವರ್ಗಾಯಿಸಿದ. 

ಉಮಾಯದ್ ಗುಂಪಿಗೆ ಸೇರಿದ್ದು ಸಿರಿಯದಲ್ಲಿ ಮಂಡಲಾಧಿಕಾರಿಯೂ ಅಬು ಸುಫಿಯನನ ಮಗನೂ ಆಗಿದ್ದ ಮುಆವಿಯನ ವಿರೋಧವನ್ನು ಅಲಿ ಎದುರಿಸಬೇಕಾಯಿತು. ಯುಫ್ರೇಟಿಸ್ ನದಿಯ ಬಳಿ ಸಿಫಿನ್ನಲ್ಲಿ ಇಬ್ಬರಿಗೂ ಯುದ್ಧವಾಗಿ, ಕಲೀಫರು ಯಾರಾಗಬೇಕೆಂಬ ಬಗ್ಗೆ ಪಂಚಾಯತಿ ನಡೆಸಿ ನಿರ್ಣಯಾವಾಗಲೆಂಬ ಷರತ್ತಿನ ಮೇಲೆ ೬೫೭ರಲ್ಲಿ ಯುದ್ಧ ನಿಂತಿತು. ಈ ನಡುವೆ ಅಲಿ ಕೊಲೆಗೆ ಈಡಾದ ಕುಫಾ ಬಳಿ ಅಲ್ ನಜಬ್ ಎಂಬ ಹೆಸರಿನ ಇವನ ಸಮಾಧಿಯುಂಟು. ಷಿಯಾಗಳಿಗೆ ಇದು ಪುಣ್ಯ ಸ್ಥಳ.

ಅಲಿಯ ಮಗ ಹಸನ್ ಮುಂದೆ ಕಲೀಫನಾಗಬೇಕೆಂಬುದು ಅಭಿಪ್ರಾಯವಾಗಿತ್ತು. ಆದರೆ ಮುಆವಿಯನ ಉಪಾಯದಿಂದ ಈ ಹುದ್ದೆ ಅವನ ಕೈ ತಪ್ಪಿತು. ಮುಆವಿಯನ ಮಾತಿನಂತೆ ಆ ಅಧಿಕಾರವನ್ನು ಆತ ತಾನಾಗಿಯೇ ಬಿಟ್ಟುಕೊಟ್ಟ. ೬೬೯ರಲ್ಲಿ ಆತ ಮಕ್ಕಾದಲ್ಲಿ ವಿಷಪ್ರಾಶನದಿಂದ ತೀರಿಕೊಂಡ. ಮುಂದೆ ಆಳಿದವರು ಉಮಾಯದ್ ಕಲೀಫರು.

ಉಮಾಯದ್ ಕಲೀಫರು
ಆರಂಭದಲ್ಲಿ ಪೈಗಂಬರರ ವಿರೋಧಿಯಾಗಿದ್ದು ತಡವಾಗಿ ಮತಾಂತರ ಹೊಂದಿದ್ದ ಅಬು ಸುಫಿಯನನ ಮಗನಿಗೆ ಕಲೀಫ ಪದವಿ ದೊರೆತ ಬಗ್ಗೆ ಇಸ್ಲಾಮಿನ ಅನೇಕ ಅನುಯಾಯಿಗಳ ವಿರೋಧವಿದ್ದು ಅವರು ಅರೆಮನಸ್ಸಿನಿಂದಲೇ ಮುಆವಿಯಾಗೆ ನಿಷ್ಠೆ ತೋರುತ್ತಿದ್ದರು. ತನ್ನ ಮಗ ಯಾಜಿದ್ಗೆ ಪಟ್ಟವಾಗಬೇಕೆಂದು ತಿಳಿಸಿ ೬೮೦ರಲ್ಲಿ ಮುಆವಿಯಾ ತೀರಿಕೊಂಡ. ಆಗ ಅಲಿಯ ಕಿರಿಯ ಮಗ ಹುಸೇನನ ಹಕ್ಕು ಮುಂದೆ ಬಂತು. ಉಮಾಯದರ ಸೇನೆ ಕುಫಾ ಬಳಿಯ ಕರ್ಜಿಲಾದಲ್ಲಿ ಹುಸೇನನನ್ನು ಕೊಂದಿತು. ಹೀಗಿದ್ದರೂ ಮಕ್ಕಾದಲ್ಲಿ ಬಂಡಾಯ ಮುಂದುವರಿಯಿತು. ಮಕ್ಕಾದಲ್ಲಿಯ ಪವಿತ್ರ ಕರಿಶಿಲೆ ಯುದ್ಧದ ಕಾಲದಲ್ಲಿ ಒಡೆದು, ಕಾಬ ಅಗ್ನಿಗೆ ಆಹುತಿಯಾಯಿತು. ಈ ನಡುವೆ ಯೆಜಿದ್ (೬೮೦-೮೨) ತೀರಿಕೊಳ್ಳಲು ಉಮಾಯದರ ಸೇನೆ ಮಕ್ಕಾ ಮುತ್ತಿಗೆಯಿಂದ ಹಿಂತೆಗೆಯಿತು. ಎರಡನೆಯ ಮುಆವಿಯನ (೬೮೩) ಮತ್ತು ಮರ್ವಾನನ (೬೮೪-೬೮೫) ಅಲ್ಪಕಾಲದ ಆಳ್ವಿಕೆಯ ಅನಂತರ ಮುಆವಿಯನ ಸೋದರ ಸಂಬಂಧಿ ಅಬ್ದ್‌-ಅಲ್-ಮಲಿಕನ (೬೮೫-೭೦೫) ಕಾಲದಲ್ಲಿ ಉಮಾಯಿದರ ಆಳ್ವಿಕೆ ದೃಢವಾಯಿತು. ಮಕ್ಕಾದ ದಂಗೆ ಕೊನೆಗಂಡಿತು. ಅಲ್-ವಲೀದನ (೭೦೫-೧೫) ಕಾಲದಲ್ಲಿ ಬಾಲ್್ಖ, ಬೊಖಾರ, ಸ್ಪೇನ್, ಸಮರ್ ಕಂಡ್ ಗಳನ್ನು ಗೆದ್ದು ಇಸ್ಲಾಂ ಸಾಮ್ರಾಜ್ಯವನ್ನು ವಿಸ್ತರಿಸಲಾಯಿತು. ಅಲ್-ವಲೀದನ ತಮ್ಮ ಸುಲೇಮಾನ್ (೭೧೫-೧೭) ಕಾನ್ಸ್ಟಾಂಟಿನೋಪಲನ್ನು ಗೆಲ್ಲುವ ಯತ್ನದಲ್ಲಿ ವಿಫಲನಾದ. ೨ನೆಯ ಉಮರ್ (೭೧೭-೨೦), ಎರಡನೆಯ ಯೆಜಿದ್ (೭೨೦-೨೪) ಹಿಷಾಂ (೭೨೪-೪೩) ಇವರ ಕಾಲದಲ್ಲಿ ಸಾಮ್ರಾಜ್ಯದ ಅವನತಿ ಆರಂಭವಾಯಿತು. ೨ನೆಯ ಅಲ್-ವಲೀದನ (೭೪೩-೪೪) ಕಾಲದಿಂದ ಧರ್ಮದ ಬಗ್ಗೆ ಸಮಾಜದ ಶ್ರದ್ಧೆ ಕಡಿಮೆಯಾಗಿ ವಿಲಾಸವೆಚ್ಚಗಳು ಹೆಚ್ಚಾದುವು. ಮುಂದೆ ಯಾಜಿûದ್ (೭೪೪) ಹಾಗೂ ಮೆರ್ವಾನರ (೭೪೪-೫೦) ಆಳ್ವಿಕೆಯ ಸಮಯದಲ್ಲಿ ಒಳಜಗಳಗಳಿಂದ ಸಾಮ್ರಾಜ್ಯ ಅವನತಿಯ ಹಾದಿ ಹಿಡಿಯಿತು. ಪೈಗಂಬರರ ಚಿಕ್ಕಪ್ಪ ಅಬ್ಬಾನನ ವಂಶದ ಅಬು ೭೪೯ರಲ್ಲಿ ಮೆರ್ವಾನನನ್ನು ಕೊಂದು ೭೫೦ರಲ್ಲಿ ದಮಾಸ್ಕಸನ್ನು ಗೆದ್ದುಕೊಂಡ. 

ಉಮಾಯದರು ಇಸ್ಲಾಂ ಸಾಮ್ರಾಜ್ಯವನ್ನು ವಿಸ್ತರಿಸಿದರು. ಸ್ಪೇನಿನಿಂದ ಸಿಂಧ್ ವರೆಗೆ ಅರಬ್ ಸಾಮ್ರಾಜ್ಯವನ್ನು ವಿಸ್ತರಿಸಿದ ಕೀರ್ತಿ ಅವರದು. ಆದರೆ ೮ನೆಯ ಶತಮಾನದಲ್ಲಿ ಪಟ್ಟಕ್ಕೆ ಬಂದ ಅಸಮರ್ಥ ಸುಖಲೋಲುಪ ಕಲೀಫರಿಂದಾಗಿ ಸಾಮ್ರಾಜ್ಯ ಕುಸಿಯಹತ್ತಿತ್ತು. ಸಿರಿಯದಿಂದ ನಡೆಯುತ್ತಿದ್ದ ಆಡಳಿತದ ಬಗ್ಗೆ ಈಜಿಪ್ಟ್‌, ಪರ್ಷಿಯ ಮತ್ತು ಅರೇಬಿಯಗಳಲ್ಲಿ ಅಸಮಾಧಾನವಿತ್ತು. ಆರಂಭದಲ್ಲಿ ಪೈಗಂಬರರ ಶತ್ರುವಾಗಿದ್ದು ತಡವಾಗಿ ಧರ್ಮಾಂತರಗೊಂಡ ಅಬು ಸುಫಿಯಾನನ ವಂಶದವರೆಂಬ ಕಾರಣಕ್ಕಾಗಿ ಪೈಗಂಬರರ ಸಂಬಂಧಿಗಳು ಈ ಶಾಖೆಯ ಬಗ್ಗೆ ದ್ವೇಷ ತಾಳಿದ್ದರು. ಹೀಗಾಗಿ ಉಮಾಯದರ ವಿರುದ್ಧ ನಡೆದ ಯುದ್ಧಕ್ಕೆ ಹೆಚ್ಚಿನ ಜನ ಬೆಂಬಲ ದೊರೆತು ಅವರ ಪತನವಾಯಿತು. ಸ್ಪೇನಿನಲ್ಲಿ ಆಳುತ್ತಿದ್ದ ಈ ವಂಶದ ಅಮೀರರು ಹತ್ತನೆಯ ಶತಮಾನದಲ್ಲಿ ತಮ್ಮನ್ನು ಕಲೀಫರೆಂದು ಕರೆದುಕೊಂಡರು. ೧೦೩೧ರಲ್ಲಿ ಆ ಶಾಖೆಯೂ ನಿರ್ನಾಮವಾಯಿತು.

ಅಬ್ಬಾಸಿದರು
ಪೈಗಂಬರ ಕಕ್ಕನಾದ ಅಬ್ಬಾಸನ ವಂಶಜರಾದ ೩೭ ಕಲೀಫರು ಪರ್ಷಿಯದಿಂದ ಆಳಿದರು. ೭೫೦ರಲ್ಲಿ ಆಳ್ವಿಕೆ ಆರಂಭಿಸಿದ ಇವರ ವಂಶ ನಿಜವಾಗಿ ಅಧಿಕಾರದಲ್ಲಿದ್ದುದು ೯೪೫ರ ವರೆಗೆ ಮಾತ್ರ. ಮುಂದೆ ಸಮರ್ಥ ಸೇನಾನಿಗಳ ಕೈ ಗೊಂಬೆಗಳಾಗಿ, ಕೇವಲ ಧಾರ್ಮಿಕ ನಾಯಕರಾಗಿ ೧೨೫೮ರ ವರೆಗೆ ಮುಂದುರಿವಸಿದರು. ಮೊದಲ ಕಲೀಫ ಅಬು ಅಲ್ ಅಬ್ಬಾಸ್ (೭೫೦-೫೪) ಉತ್ತರದ ಅನ್ ಬರ್ನಿಂದ ಆಳುತ್ತಿದ್ದ. ಅಟ್ಲಾಂಟಿಕ್ ಸಾಗರದಿಂದ ಸಿಂಧ್ ವರೆಗಿನ ಹಾಗೂ ಈಜಿಪ್ಟಿನಿಂದ ಮೆಸಪೊಟೇಮಿಯದ ವರೆಗಿನ ವಿಶಾಲ ಸಾಮ್ರಾಜ್ಯದ ಸಮ್ರಾಟನಾಗಿದ್ದ. ಈ ಹೊಸ ಸಾಮ್ರಾಜ್ಯ ಪಾರಸಿಕ ಸಂಸ್ಕೃತಿಯದಾಗಿದ್ದು ಅದರ ಮಂತ್ರಿಗಳೂ ಸೇನಾನಿಗಳೂ ಪಾರಸಿಕರೇ ಆಗಿದ್ದರು. ಆಲ್ ಅಮೂನ್ (೭೫೪-೭೫) ಬಾಗ್ದಾದಿನಲ್ಲಿ ಹೊಸ ರಾಜಧಾನಿ ಕಟ್ಟಿಸಿದ. ಈತ ಸಮರ್ಥ ಆಡಳಿತಗಾರ; ಪಂಡಿತ ಜನಾಶ್ರಯ. ಅಲ್-ಮಹ್ದಿ (೭೭೫-೮೫) ಬಾಗ್ದಾದ್ ಹಾಗೂ ಸಾಮ್ರಾಜ್ಯದೊಳಗಿನ ಇತರ ನಗರಗಳನ್ನು ಸುಂದರಗೊಳಿಸಿದ. ಈತನ ಕಾಲದಲ್ಲಿ ಬಿಝಾಂಟಿಯಂ ಸಾಮಾಜ್ಯ ಇವನಿಗೆ ಕಪ್ಪ ಕೊಡಬೇಕಾಗಿ ಬಂತು. ಅಲ್-ಹಾದಿಯ (೭೮೫-೮೬) ಅನಂತರ ಆಳಿದ ಹರೂನ್ ಅಲ್-ರಷೀದ್ (೭೮೬-೮೦೯) ಪಂಡಿತ, ಕವಿ. ಕಲಾವಿದರಿಗೂ ಪಂಡಿತರಿಗೂ ವಿಜ್ಞಾನಿಗಳಿಗೂ ಆಶ್ರಯ ನೀಡಿದ. ರಮ್ಯಕತೆಗಳ ನಾಯಕ. ಅವನ ಮಕ್ಕಳಾದ ಅಲ್-ಅಮೀನ್ ಮತ್ತು ಅಲ್-ಮಮೂನರಲ್ಲಿ ಪಟ್ಟಕ್ಕಾಗಿ ಕಲಹವಾಗಿ ಅಲ್-ಮಮೂನ್ (೮೧೩-೩೩) ಅಂತಿಮವಾಗಿ ಗೆದ್ದ. ಹರೂನ್ ಸಮರ್ಥನೂ ಘನವಂತಿಕೆಯವನೂ ಆಗಿದ್ದ. ಈತ ಪರಧರ್ಮ ಸಹಿಷ್ಣು. ಮುಂದೆ ಎಂಟು ಮಂದಿ ಕಲೀಫರು ಬಾಗ್ದಾದ್ ತ್ಯಜಿಸಿ ಉತ್ತರದ ಪರ್ಷಿಯದಿಂದ ಆಳಿದರು. ಈ ಅವಧಿಯಲ್ಲಿ ಸುಖ ಲೋಲುಪತೆ ಕಾಮುಕತೆಗಳಿಂದ ಕಲೀಫರು ದುರ್ಬಲರಾಗುತ್ತ ನಡೆದರು. ಸೇನೆಯಲ್ಲಿ ತುರ್ಕರ ಸಂಖ್ಯೆ ಹೆಚ್ಚಿತು. ಕಲೀಫರ ತುರ್ಕ ಅಂಗರಕ್ಷಕ ಪಡೆಯ ಪ್ರಾಬಲ್ಯ ಬೆಳೆಯಿತು. ಸ್ಪೇನ್, ಟ್ಯುನಿಸ್, ಮೊರಾಕೋ ಮತ್ತು ಈಜಿಪ್ಟ್‌ಗಳ ಮಂಡಲಾಧಿಕಾರಿಗಳು ಬಂಡೆದ್ದು ಸಾಮ್ರಾಜ್ಯ ಬಡವಾಯಿತು. ಕ್ಯಾಸ್ಪಿಯನ್ ಬಳಿಯ ಬೆಟ್ಟ ಪ್ರದೇಶದ ಬುವಾಯಿದರು ೯೪೫ರಲ್ಲಿ ಬಾಗ್ದಾದನ್ನು ಗೆದ್ದು ರಾಜ್ಯಾಡಳಿತವನ್ನು ತಾವೇ ನಿರ್ವಹಿಸಲಾರಂಭಿಸಿದರು. ಕಲೀಫ ಹೆಸರಿಗೆ ಮಾತ್ರ ಉಳಿದ. ೧೦೫೫ರಲ್ಲಿ ಸೆಲ್ಜಿಕ್ ತುರ್ಕರು ಬುವಾಯಿದರನ್ನು ಓಡಿಸಿ ಸುಲ್ತಾನ್ ಎಂಬ ಬಿರುದು ಧರಿಸಿ ಬಾಗ್ದಾದಿನಿಂದ ಆಳಲಾರಂಭಿಸಿದರು. ಕಲೀಫ್ ಪದವಿ ಧಾರ್ಮಿಕ ಹುದ್ದೆಯಾಗಿಯಷ್ಟೇ ಉಳಿಯಿತು. ಈ ಶಾಖೆಯ ಕೊನೆಯ ಕಲೀಫ ಅಲ್-ವಲತಾಸಿಮನನ್ನು ಮಂಗೋಲ್ ಸಮ್ರಾಟ ಹುಲಗುಖಾನ್ ಪದಚ್ಯುತಗೊಳಿಸಿ ಬಾಗ್ದಾದಿನಿಂದ ಓಡಿಸಿದ. ಈ ರೀತಿ ಅರೇಬಿಯ ಮೂಲದ ಕಲೀಫ್ ಪದವಿ ಅಂತ್ಯವಾಯಿತು. ಈಜಿಪ್ಟಿಗೆ ಓಡಿಹೋದ ಈ ವಂಶದವರನ್ನು ಆಟೋಮನ್ ತುರ್ಕರು ೧೫೧೭ರಲ್ಲಿ ಸೋಲಿಸಿದರು.

ಅಬ್ಬಾಸಿದ್ ವಂಶದ ಒಂದು ಶಾಖೆ ಫಾತಿಮಿದ್ ಎಂಬ ಹೆಸರಿನಿಂದ ಈಜಿಪ್ಟಿನಲ್ಲಿ ೯೦೯ - ೧೧೭೧ರ ವರೆಗೆ ಆಳಿತು. ೧೫೧೭ - ೧೯೨೪ರವರೆಗೆ ಆಟೋಮನ್ ತುರ್ಕರು ಕಲೀಫರೆಂದು ಕರೆದುಕೊಳ್ಳುತ್ತಿದ್ದು ಕಾನ್ಸ್‌ಟಾಂಟಿನೋಪಲಿನಿಂದ ಆಳುತ್ತಿದ್ದರು   (ನೋಡಿ-ಅಬ್ಬಾಸಿದ್ ಕಲೀಫರು; ಆಟೋಮನ್ ಚಕ್ರಾಧಿಪತ್ಯ).	(ಎಸ್.ಎನ್.ಕೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ